ಮಡಿಲು ತುಂಬುವುದು - 
	ಮದುವೆ ಆಚರಣೆಗೆ ಸಂಬಂಧಿಸಿದ ಒಂದು ಜನಪದ ಸಂಪ್ರದಾಯ. ಹಲವಾರು ಸಂದರ್ಭಗಳಲ್ಲಿ ಮಡಿಲು ತುಂಬುವ ಕಾರ್ಯ ನಡೆಯುತ್ತದೆ. ಗಂಡಿನ ಮನೆಯವರು ಹೆಣ್ಣಿನ ಮನೆಗೆ ವೀಳ್ಯಶಾಸ್ತ್ರಕ್ಕೆ ಬಂದಾಗ ಹೆಣ್ಣನ್ನು ಹಸೆಮೇಲೆ ಕೂರಿಸಿ ಮಡಿಲು ತುಂಬುವರು. ಹೆಣ್ಣಿನ ಮುಂದೆ ಒಂದು ಬಿಳಿ ಬಟ್ಟೆ ಹಾಸಿ (ಕೆಲವು ಸಂಪ್ರದಾಯದ ಪ್ರಕಾರ ಅರಿಶಿನದ ಬಟ್ಟೆ) ಅದಕ್ಕೆ ಒಂದು ಚಿಪ್ಪು ಬಾಳೆಹಣ್ಣು, ಒಂದು ಕಟ್ಟು ಎಲೆ, ಒಂದು ಹಿಡಿ ಅಡಿಕೆ, ಒಂದು ಅಚ್ಚು ಬೆಲ್ಲ, ಒಂದು ಕೊಬ್ಬರಿಬಟ್ಟಲು, ಸ್ವಲ್ಪ ಅಕ್ಕಿ, ಹುರಿಗಡಲೆ, ಅರಿಶಿನ, ಕುಂಕುಮ, ಹೂವುಗಳನ್ನು ಇಡುವರು. ಕೆಲವು ಸಂಪ್ರದಾಯದ ಪ್ತಕಾರ ಕರಿಮಣಿ, ಬಳೆ ಬಿಚ್ಚೋಲೆ, ಬಾಚಣಿಗೆ, ಕನ್ನಡಿಗಳನ್ನು ಇಡುವುದುಂಟು. ಹಸೆಮೇಲೆ ಕೂತ ಹೆಣ್ಣಿಗೆ ಅಕ್ಷತೆ ಇಡುವ ಕೆಲಸವನ್ನು ಮುತ್ತೈದೆಯರು ಮಾಡುವರು. ಮೊದಲು ಮುತ್ತೈದೆಯೊಬ್ಬಳು ಹೆಣ್ಣಿನ ಮಡಿಲಿಗೆ ಹೂವು, ಹಣ್ಣು, ಕಾಯಿ, ಬೆಲ್ಲಗಳನ್ನು ತುಂಬುವಳು, ಐದು ಜನ ಅಥವಾ ಒಂಬತ್ತು ಜನ ಮುತ್ತೈದೆಯರು ಮಡಿಲು ತುಂಬಿ ಶಾಸ್ತ್ರಮಾಡಿ ಅನಂತರ ಅದನ್ನೆಲ್ಲ ಗಂಟುಕಟ್ಟಿ ಹೆಣ್ಣನ್ನು ಹಸೆಯಿಂದ ಏಳಿಸುವರು. ಕೆಲವು ಸಂಪ್ರದಾಯದ ಪ್ರಕಾರ ಅವನ್ನೆಲ್ಲ ಅರಿಶಿನದ ಬಟ್ಟೆಯಲ್ಲಿರಿಸಿದಂತೆ ಮುತ್ತೈದೆಯರು ಹೆಣ್ಣಿನ ಸೊಂಟಕ್ಕೆ ಕಟ್ಟಬಹುದು. ಇಂಥ ಸಂದರ್ಭದಲ್ಲಿ ಹೆಣ್ಣನ್ನು ದೇವರ ಮುಂದೆ ಕರೆದುಕೊಂಡು ಹೋಗಿ ಆಕೆಯನ್ನು ಪೂಜೆಮಾಡಿಸಿ, ಗಂಟು ಕಟ್ಟಿದ ಮುತ್ತೈದೆಯರೇ ಮಡಿಲನ್ನು ಬಿಚ್ಚುವ ಕೆಲಸವನ್ನೂ ಮಾಡುವರು. ಮಡಿಲು ತುಂಬಿದ ವಸ್ತುಗಳನ್ನು ಸಿಹಿತಿಂಡಿಗೆ ಉಪಯೋಗಿಸಬಹುದು. ಕರಿಮಣಿ, ಬಿಚ್ಚೋಲೆ, ಬಳೆ, ಬಾಚಣಿಗೆ, ಕನ್ನಡಿಗಳನ್ನು ಮಾತ್ರ ಯಾರಾದರೂ ಮುತ್ತೈದೆಯರಿಗೆ ಕೊಡುತ್ತಾರೆ ಅಥವಾ ಗಂಗೆಯಲ್ಲಿ ಬಿಡುತ್ತಾರೆ.

	ಮದುವೆ ಮೂರು ದಿವಸ ಅಥವಾ ಐದು ದಿವಸ ಅನ್ನುವ ಹಾಗೆ ತಾಯಿಮನೆ ಹಸೆ ಎಂಬ ಕಾರ್ಯ ನಡೆಯುತ್ತದೆ. ಈ ಸಂದರ್ಭದಲ್ಲಿಯೂ ಇದೇ ಬಗೆಯಲ್ಲಿ ಶಾಸ್ತ್ರ ನಡೆಯುತ್ತದೆ. ಕೆಲವರಲ್ಲಿ ಧಾರೆ ದಿವಸವೂ ಮಡಿಲು ತುಂಬುವುದುಂಟು. ಇಲ್ಲಿಯ ವಿಶೇಷವೆಂದರೆ ಮಡಿಲಿಗೆ ಒಂದು ರವಿಕೆ ಕಣ ಮತ್ತು ಒಂದು ಬೆಳ್ಳಿ ಬಟ್ಟಲು ಹಾಕುವುದು. ರವಿಕೆಕಣವನ್ನು ಹೆಣ್ಣಿಗೆ ಹೊಲಿಸಿಕೊಡಬೇಕು. ಬಟ್ಟಲನ್ನು ಮಾತ್ರ ಗಂಡಿನ ತಂಗಿಗೆ ಕೊಡಬೇಕು ಎಂಬ ನಿಯಮವಿದೆ. ಮೊದಲ ಬಾರಿಗೆ ಗಂಡನ ಮನೆಗೆ ಹೋಗುವಾಗಲೂ ಹೆಣ್ಣಿನ ಸೆರಗಿಗೆ ಮಡಿಲು ತುಂಬಿದ ವಸ್ತುಗಳನ್ನು ಕಟ್ಟಿ ಕಜ್ಜಾಯದ ತಪ್ಪಲೆ ಹೊರಿಸಿಕೊಂಡು ಹೋಗುವುದುಂಟು. ದೇವರ ಮುಂದೆ ಪೂಜೆ ಮಾಡಿಸಿ ಗಂಟು ಬಿಚ್ಚಿದ ಅನಂತರ ಮಡಿಲು ತುಂಬಿದ ವಸ್ತುಗಳನ್ನು ಸಿಹಿ ತಿಂಡಿಗೆ ಉಪಯೋಗಿಸಿಕೊಳ್ಳುತ್ತಾರೆ.

	ಶೋಭನದ ದಿನ ಮಡಿಲು ತುಂಬುವುದು ಅತ್ಯಂತ ಪ್ರಮುಖವಾದುದು. ಒಂದು ಸಂಪ್ರದಾಯದ ಪ್ರಕಾರ ಹೆಣ್ಣನ್ನು ಹಾಸಿಗೆ ಮೇಲೆ ಕೂರಿಸಿ ಗಂಡಿನ ಕೈಲಿ ಮಡಿಲು ತುಂಬಿಸುತ್ತಾರೆ. ಇಲ್ಲಿ ಗಂಡು ಹೆಣ್ಣಿನ ಸೆರಗಿಗೆ ಬಾಳೆಹಣ್ಣು, ವೀಳ್ಯದೆಲೆ, ಬೆಲ್ಲ, ಕೊಬ್ಬರಿ ಮೊದಲಾದವನ್ನು ಇಡುವನು. ಅನಂತರ ಮೂರು ಜನ ಮುತ್ತೈದೆಯರು ಶಾಸ್ತ್ರಮಾಡಿ ಅದನ್ನು ಗಂಟು ಕಟ್ಟಿಸಿ ತೆಗೆದಿಟ್ಟುಕೊಂಡಿದ್ದು, ಹೆಣ್ಣು ಗಂಡಿನ ಮನೆಗೆ ಹೋಗುವಾಗ ಕೊಟ್ಟು ಕಳುಹಿಸುವರು. ದೊನ್ನೆಸೆಟ್ಟರಲ್ಲಿ ಒಸಗೆಯ ಮಡಿಲು ತುಂಬುವ ಶಾಸ್ತ್ರ ಒಂದು ವಿಶೇಷ ರೀತಿಯಲ್ಲಿ ಜರಗುತ್ತದೆ. ಹೆಣ್ಣುಗಂಡನ್ನು ಹಸೆಮೇಲೆ ಕೂರಿಸುವುದಕ್ಕೆ ಮುನ್ನ ಐದು ಜನ ಮುತ್ತೈದೆಯರು ಹೆಣ್ಣೂ ಸೇರಿದಂತೆ ಹೊಸಲಿನ ಆಚೆ ಹೆಣ್ಣಿನ ಸೆರಗು ಹಿಡಿದು ನಿಲ್ಲುತ್ತಾರೆ. ಹೊಸಲಿನ ಈಚೆ ಗಂಡನ್ನು ನಿಲ್ಲಿಸಿ ಗಂಡಸರು ನಿಂತಿರುತ್ತಾರೆ. ಮಧ್ಯೆ ಹೆಣ್ಣು ಗಂಡು ನೋಡದಹಾಗೆ ತೆರೆ ಹಾಕಿರುತ್ತಾರೆ. ಅನಂತರ ಗಂಡಿನ ಮನೆಯವರು ತಂದಿದ್ದ ಪದಾರ್ಥಗಳನ್ನೆಲ್ಲ ಗಂಡಸರು ತೆರೆಯ ಆಚೆ ನಿಂತಿರುವ ಹೆಣ್ಣಿನ ಮಡಿಲಿಗೆ ಗಂಡಿನ ಕೈಲಿ ಹಾಕಿಸುವರು. ಅಲ್ಲದೆ ಒಂದು ಕನ್ನಡಿ ಮತ್ತು ಒಂದು ಚೊಂಬು ನೀರು ತರಿಸಿ, ತೆರೆ ಸರಿಸಿ ಕನ್ನಡಿಯಲ್ಲಿ ಹೆಣ್ಣಿನ ಮುಖ ಗಂಡಿಗೆ ತೋರಿಸಿ ಚೊಂಬಿನ ನೀರನ್ನು ಹೆಣ್ಣಿನ ಕೈಯಿಂದ ಗಂಡಿಗೆ ಕೊಡಿಸುವರು. ಮಡಿಲಿಗೆ ಹಾಕಿಸಿದ್ದನ್ನೆಲ್ಲ ದೇವರ ಮುಂದಿರಿಸಿ ಪೂಜೆ ಮಾಡಿಸಿ, ಹೆಣ್ಣುಗಂಡುಗಳನ್ನು ಹಸೆ ಮೇಲೆ ಕೂರಿಸಿ ಶಾಸ್ತ್ರ ನಡೆಸುವರು. ಅನಂತರ ಮಲಗುವ ಮನೆಗೆ ಬಿಡುವರು. ಮಡಿಲು ತುಂಬಿದ ಪದಾರ್ಥಗಳನ್ನು ಗಂಡಿನ ಮನೆಗೆ ಸ್ವಲ್ಪ ಕೊಟ್ಟು, ಉಳಿದುದನ್ನು ಹೆಣ್ಣಿನವರು ಉಪಯೋಗಿಸಿಕೊಳ್ಳಬಹುದು.

	ಮೈನೆರೆದಾಗ ಮಡಿಲು ತುಂಬುವ ಪದ್ಧತಿ ಕೆಲವೆಡೆ ಕಾಣಬರುತ್ತದೆ. ಈ ಸಮಯದಲ್ಲಿ ಮಡಿಲಿಗೆ ಆರಿಸಿನದ ಕೊನೆ, ಸೀಗೇಕಾಯಿ, ಚಿಗಳಿ, ಕೊಬ್ಬರಿ, ಬೆಲ್ಲ, ತಂಬಿಟ್ಟು ಮೊದಲಾದವನ್ನು ವಿಶೇಷವಾಗಿ ತುಂಬುತ್ತಾರೆ.

	ಮಡಿಲು ತುಂಬುವ ಪ್ರತಿಯೊಂದು ಸಂದರ್ಭದಲ್ಲೂ ಹಾಡುಗಳನ್ನು ಹಾಡುವುದುಂಟು. ಮಡಿಲು ತುಂಬುವ ಹಾಡುಗಳೆಂದೇ ಇವುಗಳಿಗೆ ಹೆಸರು. ಸಾಮಾನ್ಯವಾಗಿ ಇಂಥ ಹಾಡುಗಳ ಪಲ್ಲವಿ ಮಡಲುದುಂಬಿರೇ ಕಡಲ ಸೈವಾಗಿ; ರಾಧಾ ರುಕ್ಮಿಣಿ ಸೀತಾ ಎಂಬ ರೀತಿಯದಾಗಿರುತ್ತವೆ. ಈ ಹಾಡುಗಳಲ್ಲಿ ಮಡಿಲು ತುಂಬುವ ಶಾಸ್ತ್ರದ ಕ್ರಮ ಮತ್ತು ತರಬೇಕಾದ ಪದಾರ್ಥಗಳ ಪಟ್ಟಿ, ಹಾಸ್ಯಕ್ಕಾಗಿ ಬೀಗರ ಜೊತೆ ಅಣಕವಾಡುವುದು. ಗೆಳೆಯ ಗೆಳತಿಯರನ್ನು ಮತ್ತು ಹೆಣ್ಣುಗಂಡನ್ನು ಹಂಗಿಸುವುದು ಮೊದಲಾದ ವಿಷಯಗಳು ಕಂಡುಬರುತ್ತವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ